Friday, 15 February 2013

Bhagavad Gita Kannada

ಸ್ತ್ರೀಯರು ಶೂದ್ರರು .... ಭಗವದ್ಗೀತೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಬಹುದೇ?----- ಭಾಗವತ ಈ ಪ್ರಶ್ನೆಗೆ ಉತ್ತರಿಸುತ್ತದೆ.
ಸ್ತ್ರೀ ಶೂದ್ರ ಬ್ರಹ್ಮ(/ದ್ವಿಜ)ಬಂಧೂನಾಂ ತ್ರಯೀ ನ ಶ್ರುತಿಗೋಚರಾ ।
ಕರ್ಮಶ್ರೇಯಸಿ ಮೂಢಾನಾಂ ಶ್ರೇಯ ಏವಂ ಭವೇದಿಹ ।
ಇತಿ ಭಾರತಮಾಖ್ಯಾನಂ ಕೃಪಯಾ ಮುನಿನಾ ಕೃತಮ್ ॥೨೪॥

ಈ ಶ್ಲೋಕವನ್ನು ಆಳವಾಗಿ ವಿಶ್ಲೇಷಿಸದೇ ಇದ್ದರೆ, ಇಲ್ಲಿ ಬರಿಯ ಗೊಂದಲ ಹಾಗೂ ವಿವಾದ ಹುಟ್ಟುವ ಸಾಧ್ಯತೆ ಇದೆ. ಇಲ್ಲಿ: “ಸ್ತ್ರೀಯರಿಗೆ, ಶೂದ್ರರಿಗೆ ಮತ್ತು ಬ್ರಹ್ಮಬಂಧುಗಳಿಗೆ ವೇದ ಮುಟ್ಟುವುದಿಲ್ಲ, ಅದಕ್ಕಾಗಿ ಅವರಿಗೆ ಮುಟ್ಟುವಂತೆ ಒಂದು ಅಧ್ಯಾತ್ಮ ಸಾಹಿತ್ಯ ಕೊಡಬೇಕು ಎಂದು ಬಯಸಿ, ವ್ಯಾಸರು ಮಹಾಭಾರತ ರಚನೆ ಮಾಡಿದರು” ಎನ್ನಲಾಗಿದೆ. ಇದನ್ನು ನಾವು ಆಳವಾಗಿ ಚಿಂತನೆ ಮಾಡಿ, ಶ್ಲೋಕದಲ್ಲಿ ಹೇಳಿರುವ ಸತ್ಯ ಸಂದೇಶವನ್ನು ತಿಳಿಯಬೇಕು.
ಅಧ್ಯಾತ್ಮ ಜ್ಞಾನ ಎಲ್ಲರಿಗೂ ಮುಟ್ಟಬೇಕು. ಆದರೆ ಇಲ್ಲಿ ಕೆಲವರಿಗೆ ಅಧಿಕಾರ ಇಲ್ಲಾ ಎಂದು ಏಕೆ ಹೇಳಿದರು ಎನ್ನುವುದನ್ನು ನಾವು ಮೊದಲು ಅರಿಯಬೇಕು. ಯಾವುದೇ ಒಂದು ಅಧ್ಯಯನಕ್ಕೆ ಲಿಂಗ-ಜಾತಿ ಮಾನದಂಡವಲ್ಲ. ಜ್ಞಾನಕ್ಕೆ ಮಾನದಂಡ ಅರ್ಹತೆ. ವಿದ್ಯೆಯನ್ನು ಅರ್ಹತೆ ಇಲ್ಲದವರಿಗೆ ಹೇಳಿದರೆ ಅದು ದುರುಪಯೋಗ ಅಥವಾ ನಿರುಪಯೋಗವಾಗುತ್ತದೆ. ಹೀಗಾಗಿ ಅರ್ಹತೆಯನ್ನು ಪರೀಕ್ಷಿಸದೇ ಯಾವುದೇ ವಿದ್ಯೆಯನ್ನು ಕೊಡುವ ಕ್ರಮವಿಲ್ಲ. ವೇದ ಕೂಡಾ ಅಷ್ಟೇ. ಗ್ರಹಣ ಮಾಡುವ ಸಾಮರ್ಥ್ಯ ಇದ್ದವರಷ್ಟೇ ವೇದದ ಅಧಿಕಾರಿಗಳು.
ಇಲ್ಲಿ “ಸ್ತ್ರೀಯರಿಗೆ ವೇದವನ್ನು ಗ್ರಹಣ ಮಾಡುವ ಸಾಮರ್ಥ್ಯ ಇಲ್ಲವೇ?” ಎನ್ನುವ ಪ್ರಶ್ನೆ ಎಲ್ಲರಿಗೂ ಬರುತ್ತದೆ. ಇದನ್ನು ಅರ್ಥಮಾಡಿಕೊಳ್ಳಲು ನಾವು ಇತಿಹಾಸವನ್ನು ನೋಡಬೇಕಾಗುತ್ತದೆ. ಹಿಂದೆ ಸ್ತ್ರೀಯರಲ್ಲಿ ಎರಡು ವರ್ಗವಿತ್ತು. ೧. ವೇದಾಧ್ಯಯನಕ್ಕೋಸ್ಕರ ಮದುವೆಯಾಗದೇ ಇರುತ್ತಿದ್ದ ‘ಬ್ರಹ್ಮವಾದಿನಿ’ಯರು ಹಾಗೂ ೨. ಪ್ರಾರ್ಥಮಿಕ ಅಧ್ಯಯನದ ನಂತರ ಮದುವೆಯಾಗುತ್ತಿದ್ದ ‘ಸತ್ಯವಧು’ಗಳು. ಬ್ರಹ್ಮವಾದಿನಿಯರು ಸಾಮಾಜಿಕವಾಗಿ ಅತಂತ್ರರಾಗಿರುತ್ತಿದ್ದರು. ರಕ್ಷಣೆ ಇಲ್ಲದ ಹೆಣ್ಣನ್ನು ಸಮಾಜ ಕೆಟ್ಟದೃಷ್ಟಿಯಿಂದ ಕಾಣುವ ಅಪಾಯ ಅಲ್ಲಿತ್ತು. ವೇದವ್ಯಾಸರೇ ಭಾರತದಲ್ಲಿ ಹೇಳುವಂತೆ: “ಹೇಗೆ ಮಾರ್ಗದಲ್ಲಿ ಬಿದ್ದಿರುವ ಮಾಂಸದ ತುಂಡನ್ನು ಹದ್ದು-ನಾಯಿಗಳು ನೋಡುತ್ತಾವೋ ಹಾಗೇ, ರಕ್ಷಣೆ ಇಲ್ಲದ ಹೆಣ್ಣನ್ನು ಸಮಾಜ ಕಾಣುತ್ತದೆ” ಎಂದು. ಇದಕ್ಕಾಗಿ ಸ್ತ್ರೀಯರು ಮದುವೆಯಾಗುವುದೇ ಉತ್ತಮ ಎನ್ನುವ ಸಾಮಾಜಿಕ ಪದ್ಧತಿ ಜಾರಿಗೆ ಬಂತು.
ಇಲ್ಲಿ ನಮಗೆ ಮುಂದೆ ಕಾಡುವ ಪ್ರಶ್ನೆ ಏನೆಂದರೆ: “ಮದುವೆಯಾದ ಹೆಣ್ಣು ಏಕೆ ವೇದಾಧ್ಯಯನ ಮಾಡಬಾರದು” ಎನ್ನುವುದು. ಸೂಕ್ಷ್ಮವಾಗಿ ಈ ವಿಚಾರವನ್ನು ನಾವು ವಿಶ್ಲೇಷಿಸಿದರೆ ನಮಗೆ ತಿಳಿಯುವುದೇನೆಂದರೆ: “ಗರ್ಭಕೋಶ” ಎನ್ನುವ ವಿಶೇಷ ಭಾಗ ಪ್ರಕೃತಿ ಕೇವಲ ಹೆಣ್ಣಿಗೆ ನೀಡಿದೆ. ಆದ್ದರಿಂದ ಸಮಾಜಕ್ಕೆ ಒಂದು ಉತ್ತಮ ಸಂತಾನವನ್ನು ಹೆತ್ತು ಕೊಡುವ ಜವಾಬ್ಧಾರಿ ಹೆಣ್ಣಿನಲ್ಲಿದೆ. ಅತಿಯಾದ ಮಾನಸಿಕ ಒತ್ತಡಕ್ಕೊಳಗಾದ ಹೆಣ್ಣಿನ ಗರ್ಭಕೋಶ ದುರ್ಬಲವಾಗುವ ಅಪಾಯವಿದೆ ಎಂದು ಇಂದಿನ ವೈದ್ಯಶಾಸ್ತ್ರ ಹೇಳುತ್ತದೆ. ವೇದಾಧ್ಯಯನ ಹಾಗೂ ಮಗುವಿನ ಪಾಲನೆ ಹೆಣ್ಣಿಗೆ ಎರಡು ದೋಣಿಯಲ್ಲಿ ಕಾಲಿಟ್ಟ ಪಯಣ. ಇದು ಆಕೆಯಲ್ಲಿ ಜನಿಸುವ ಮಗುವಿನ ಮೇಲೆ ಪ್ರಭಾವಬೀರಬಹುದು. “ಸಮಾಜಕ್ಕೆ ಉತ್ತಮ ಸಂತಾನ ಕೊಡುವುದು ಹೆಣ್ಣಿನ ಕರ್ತವ್ಯ ಹಾಗೂ ಅದು ವೇದಾಧ್ಯಯನ ಮಾಡುವುದಕ್ಕಿಂತ ಹೆಚ್ಚಿನ ಪುಣ್ಯದಕೆಲಸ” ಎಂದು ಶಾಸ್ತಕಾರರು ಹೇಳುತ್ತಾರೆ. ಇದು ಪ್ರಕೃತಿಯ ಕೊಡುಗೆಯನ್ನು ನಾವು ಜೀವನದಲ್ಲಿ ಹೊಂದಾಣಿಕೆ ಮಾಡಿಕೊಂಡು ಬದುಕುವ ವಿಧಾನ. ಇದನ್ನು ಬಿಟ್ಟು ಇಲ್ಲಿ ಭೇದಭಾವ, ಮೇಲು-ಕೀಳು ಯಾವುದೂ ಇಲ್ಲ.
ಹೆಣ್ಣಿಗೆ ವೇದಾಧಿಕಾರ ಇಲ್ಲ ಎಂದಿಲ್ಲ. ಏಕೆಂದರೆ ಅವರು “ಧರ್ಮೇಚ ಅರ್ಥೇಚ ಕಾಮೇಚ ನಾತಿಚರಾಮಿ” ಎಂದು ಪ್ರತಿಜ್ಞೆ ಮಾಡುವವರು. ಗಂಡ ಮಾಡುವ ಧರ್ಮ ಕಾರ್ಯದಲ್ಲಿ ಸ್ತ್ರೀಗೆ ಸಹಭಾಗವಿದೆ. ಇವೆಲ್ಲವೂ ವೈದಿಕವಾಗಿಯೇ ನಡೆಯುತ್ತದೆ ಮತ್ತು ಅಲ್ಲಿ ಸ್ತ್ರೀ ಕುಳಿತು ಸಂಕಲ್ಪ ಮಾಡುತ್ತಾಳೆ. ಆದರೆ “ವೇದಾಧ್ಯಯನಕ್ಕೆ ಬದುಕನ್ನು ಮೀಸಲಿಟ್ಟು ಸಾಂಸಾರಿಕ ಜೀವನವನ್ನು ನೀರಸ ಮಾಡಿಕೊಳ್ಳಬೇಡಿ” ಎನ್ನುವುದು ಹಿಂದಿನವರ ಕಿವಿಮಾತು. ಕೆಲವು ಅಸಾಧಾರಣ ವ್ಯಕ್ತಿತ್ವವುಳ್ಳ ಸ್ತ್ರೀಯರಿದ್ದಾರೆ. ವೇದ ಮಂತ್ರವನ್ನು ಕಂಡ ಋಷಿಕೆಯರೂ ಇದ್ದಾರೆ. ಆದರೆ ಸ್ತ್ರೀಯರ ಮೇಲೆ ವೇದಾಧ್ಯಯನದ ಒತ್ತಡ/ಹೇರಿಕೆ ನಿಷಿದ್ಧ.
ಭಗವಂತನ ಸೃಷ್ಟಿಕ್ರಿಯೆಯ ಮೂಲಸಾಧನ ಹೆಣ್ಣು. ಆತ ತನ್ನ ಸೃಷ್ಟಿಕ್ರಿಯೆಗೆ ನಮ್ಮನ್ನು ಮಾಧ್ಯಮವಾಗಿ ಬಳಸುತ್ತಾನೆ ಎನ್ನುವುದು ಹೆಣ್ಣಿಗೆ ಹೆಮ್ಮೆಪಡುವ ಸಂಗತಿ. ಅಂತಹ ಶ್ರೇಷ್ಠ ಕಾರ್ಯ ಮಾಡಲು ಇಂತಹ ಕೆಲವು ನಿಯಮಗಳನ್ನು ಶಾಸ್ತ್ರ ಹೇಳುತ್ತದೆ. ದುರ್ಬಲವಾದ ಮಗುವನ್ನು ಕೊಡುವ ತಾಯಿಯಾಗಬಾರದು ಎನ್ನುವ ಉದ್ದೇಶದಿಂದ, ಸ್ತ್ರೀಯರಿಗೆ ಬಲವಂತದ ಉಚ್ಛಶಿಕ್ಷಣವನ್ನು ಶಾಸ್ತ್ರ ನಿಷೇಧಿಸುತ್ತದೆ. ಎರಡು ದೋಣಿಯಲ್ಲಿ ಕಾಲಿಟ್ಟು ಮಾಡುವ ಪಯಣ ಎಂದೂ ಶ್ರೇಯಸ್ಕರವಲ್ಲ. ಅಲ್ಲಿ ಒಂದೇ ನಮ್ಮ ಸಂತಾನಕ್ಕೆ ಅಥವಾ ನಮಗೇ ಅನ್ಯಾಯವಾಗುವ ಸಾಧ್ಯತೆ ಹೆಚ್ಚು. ಇವು ಜೀವನದ ಅನುಭವದ ಮಾತೇ ಹೊರತು, ಪಕ್ಷಪಾತದ ಹೇಳಿಕೆಗಳಲ್ಲ.
ವೇದಸಂಸ್ಕೃತ ಅತ್ಯಂತ ಭಿನ್ನ. ಸಂಸ್ಕೃತ ಭಾಷೆಯನ್ನು ಚನ್ನಾಗಿ ಬಲ್ಲ ಪಂಡಿತರಿಗೇ ವೇದ ಅರ್ಥವಾಗುವುದಿಲ್ಲ. ವೇದದ ಅಂತರಂಗ, ಅದರಲ್ಲಿರುವ ಅಧ್ಯಾತ್ಮ ರಹಸ್ಯ ಅತ್ಯಂತ ಗುಹ್ಯ. ಹೀಗಾಗಿ ವೇದದ ಮೇಲ್ನೋಟದ ಅರ್ಥ ತಿಳಿಯಲಿಕ್ಕೇ ಒಂದು ಜನ್ಮ ಸಾಲದು. ಆದ್ದರಿಂದ ಇಡೀ ಜೀವನವನ್ನು ವೇದಾಧ್ಯಯನಕ್ಕೆ ಮುಡಿಪಾಗಿಡಲು ಬದ್ಧರಾದವರು ಮಾತ್ರ ವೇದಾಧ್ಯಯನಕ್ಕೆ ಕೈಹಾಕಬೇಕು. ಹಾಗೆ ಅಧ್ಯಯನ ಮಾಡಲು ಬ್ರಾಹ್ಮಣ್ಯದ ಅರ್ಹತೆ ಬಹಳ ಮುಖ್ಯ. ಗೀತೆಯಲ್ಲಿ ಹೇಳುವಂತೆ: ಶಮಃ ದಮಃ ತಪಃ ಶೌಚಂ ಕ್ಷಾಂತಿ ಆರ್ಜವಮ್ ಏವ ಚ । ಜ್ಞಾನಂ ವಿಜ್ಞಾನಮ್ ಆಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಮ್ ॥೧೮-೪೨॥ –– ಭಗವಂತನಲ್ಲಿ ನಿಷ್ಠೆ, ಇಂದ್ರಿಯಗಳಲ್ಲಿ ಹಿಡಿತ, ಉಪವಾಸಾದಿ ನೇಮಗಳು, ನೈರ್ಮಲ್ಯ, ಅಪಕಾರಿಯನ್ನೂ ಮನ್ನಿಸುವ ಸೈರಣೆ, ನೇರ ನಡೆ-ನುಡಿ, ತಿಳಿವು, ಆಳವಾದ ಸಂಶೋಧನಾ ದೃಷ್ಟಿ ಮತ್ತು ಆಸ್ತಿಕತೆ- ಇವು ಬ್ರಾಹ್ಮಣ ಸ್ವಭಾವದ ಸಹಜ ಕರ್ಮಗಳು. ಈ ಎಲ್ಲಾ ಅರ್ಹತೆಗಳು ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಎಲ್ಲರಿಗೂ ಬರಬೇಕೆಂದೇನೂ ಇಲ್ಲ. ಆ ರೀತಿ ಬ್ರಾಹ್ಮಣ್ಯದ ಅರ್ಹತೆ ಇಲ್ಲದ, ಆದರೆ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ‘ಬ್ರಹ್ಮಬಂಧು’ಗಳಿಗಾಗಿ, ಸದಾ ಸೇವಾ ಮಾರ್ಗದಲ್ಲಿ ನಿರತರಾಗಿರುವ ಶೂದ್ರವರ್ಣದವರಿಗಾಗಿ ಮತ್ತು ಸ್ತ್ರೀಯರಿಗಾಗಿ ವ್ಯಾಸರು ಮಹಾಭಾರತ ರಚನೆ ಮಾಡಿದರು. ಏನು ಮಾಡಬೇಕು-ಏನು ಮಾಡಬಾರದು ಎಂದು ಅರಿಯದೇ ತೊಳಲಾಡುತ್ತಿರುವ ಜನರಿಗೆ, ಒಂದು ಶ್ರೇಯಸ್ಸಿನ ಮಾರ್ಗ ತೋರಿಸುವುದು ವ್ಯಾಸರ ಭಾರತ ರಚನೆಯ ಮೂಲ ಉದ್ದೇಶವಾಗಿತ್ತು.
ಇಲ್ಲಿ ನಮಗೆ ಸ್ಪಷ್ಟವಾಗಿ ತಿಳಿಯುವುದೇನೆಂದರೆ: ವೇದದಲ್ಲಿ ಹೇಳಿದ ಅಧ್ಯಾತ್ಮ ಸಾರವನ್ನು ಮನುಷ್ಯಮಾತ್ರಕ್ಕೆ ಮುಟ್ಟಿಸುವ ಉದ್ದೇಶದಿಂದ ವ್ಯಾಸರು ಮಹಾಭಾರತ ರಚನೆ ಮಾಡಿದರು. ಹಾಗಾಗಿ ಬ್ರಹ್ಮಜ್ಞಾನಿಗೆ ವೇದಾರ್ಥ ನಿರ್ಣಯಕ್ಕಾಗಿ ಭಾರತವಾದರೆ, ಉಳಿದವರಿಗೆ ಮಹಾಭಾರತವೇ ವೇದ. ಹೀಗಿರುವಾಗ ಮಹಾಭಾರತದ ಅಂಗವಾದ ಭಗವದ್ಗೀತೆ ಮತ್ತು ವಿಷ್ಣುಸಹಸ್ರನಾಮವನ್ನು ಸ್ತ್ರೀಯರು ಓದಬಾರದು ಎಂದು ಹೇಳುವುದು ಅಸಂಗತ. ಭಾರತಕ್ಕೆ ಗಂಡಸು-ಹೆಂಗಸು-ಶೂದ್ರ-ಬ್ರಾಹ್ಮಣ ಎನ್ನುವ ಭೇದವಿಲ್ಲ. ಅದು ಎಲ್ಲಾ ವರ್ಣಾಶ್ರಮದವರಿಗೆ ಭಗವಂತ ನೀಡಿದ ಪಂಚಮ ವೇದ.

No comments:

Post a Comment