Bhagavad Gita Kannada
ತಾನಿ ಸರ್ವಾಣಿ ಸಂಯಮ್ಯ ಯುಕ್ತ ಆಸೀತ ಮತ್ ಪರಃ ।
ವಶೇ ಹಿ ಯಸ್ಯೇಂದ್ರಿಯಾಣಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥ (CHAP 02 - 61 )
ಇಂದ್ರಿಯಗಳಿಂದ ಮನಸ್ಸು ಕದಲುವುದು ಅಥವಾ ಮನಸ್ಸಿನಿಂದ ಇಂದ್ರಿಯ ಬೇಡದ ಕಾರ್ಯದಲ್ಲಿ ತೊಡಗುವುದು. ಈ ಸಮಸ್ಯೆಯಿಂದ ಈಚೆ ಬರಬೇಕಾದರೆ ನಾವು ಇಂದ್ರಿಯಗಳೆಂಬ ಕುದುರೆಗಳನ್ನು ಪಳಗಿಸಿ, ಮನಸ್ಸೆಂಬ ಕಡಿವಾಣದಲ್ಲಿ ಅವುಗಳನ್ನು ಬಿಗಿದು, ಅದು ಸಡಿಲವಾಗದಂತೆ ಬಿಗಿ ಹಿಡಿಯಬೇಕು. ಈ ಕಾರ್ಯವನ್ನು ಯಶಸ್ಸಾಗಿ ಮಾಡಬೇಕಾದರೆ ಮೊದಲು ನಾವು ಭಗವಂತನಲ್ಲಿ ಶರಣಾಗಬೇಕು. "ಈ ಜವಾಬ್ದಾರಿಯನ್ನು ನನಗೊಪ್ಪಿಸು" ಎನ್ನುತ್ತಾನೆ ಕೃಷ್ಣ. ಎಂಥಹ ಭರವಸೆ?.. "ನನ್ನ ಇಂದ್ರಿಯಗಳು ದಾರಿತಪ್ಪದಂತೆ ನನ್ನೊಳಗಿದ್ದು ಪ್ರೇರೇಪಿಸು ಭಗವಂತ, ನಿನ್ನ ಚಿಂತನೆಯ ಶಕ್ತಿ ನಿರಂತರ ನನ್ನ ಮನಸ್ಸಿನಲ್ಲಿ ಉಳಿಯುವಂತೆ ಮಾಡು" ಎಂದು ಭಗವಂತನನ್ನು ಪ್ರಾರ್ಥಿಸಬೇಕು. ಭಗವಂತನಲ್ಲಿ ಶರಣಾಗತಿಯನ್ನು ಪಡೆಯದೆ ಎಲ್ಲವನ್ನು ಸ್ವಪ್ರಯತ್ನದಿಂದ ಮಾಡುತ್ತೇನೆ ಎಂದರೆ ಅದು ಅಸಾಧ್ಯ. ಪ್ರಯತ್ನ ಮಾಡಬೇಕು, ಪ್ರಯತ್ನದಲ್ಲಿ ಜಯ ದೊರೆಯುವಂತೆ ಭಗವಂತನಲ್ಲಿ ಬೇಡಿ, ಆತನಲ್ಲಿ ಶರಣಾದಾಗ, ಒಂದಲ್ಲ ಒಂದು ದಿನ ಅನುಭೂತಿಯ ಅನುಗ್ರಹವಾಗುತ್ತದೆ. ಆಗ ಸಂಪೂರ್ಣ ಇಂದ್ರಿಯ ನಿಗ್ರಹ ಸಾಧ್ಯ. ಈ ಸಾಧನೆ ಅನೇಕ ಜನ್ಮದ್ದು. ಹತ್ತು ದಿನ ಸಾಧನೆ ಮಾಡಿ ನಿರಾಶೆಯಾಗಿ ನಾಸ್ತಿಕನಾಗದೆ, ನಿರಂತರ ಸಾಧನೆ ಮಾಡಿದರೆ ಯಶಸ್ಸು ನಮ್ಮದಾಗುತ್ತದೆ. ಯಾರ ಇಂದ್ರಿಯಗಳು ಅವನ ವಶಕ್ಕೆ ಬಂದವೋ, ಅವನ ಅರಿವು ಗಟ್ಟಿಯಾಗುತ್ತದೆ. ಆತ ಜೀವನದಲ್ಲಿ, ಸಾಧನೆಯ ಹಾದಿಯಲ್ಲಿ ಗೆಲ್ಲುತ್ತಾನೆ...
No comments:
Post a Comment