Tuesday, 24 September 2013

Dharma Granth

ರಮಣ ಮಹರ್ಷಿಗಳ ಪ್ರಾಣಿ ಪ್ರೀತಿ ಅನುಕರಣೀಯ. ತಮ್ಮ ಆಶ್ರಮಕ್ಕೆ ಹಾವುಗಳು ಬಂದರೆ, ಅವುಗಳನ್ನು ಕೊಲ್ಲಲು ಅವರು ಎಂದಿಗೂ ಬಿಡುತ್ತಿರಲಿಲ್ಲ. ''ಹಾವುಗಳ ರಾಜ್ಯಕ್ಕೆ ನಾವು ಬಂದಿದ್ದೇವೆ. ಅವುಗಳಿಗೆ ತೊಂದರೆ ಕೊಡಬಾರದು,' ' ಎನ್ನುತ್ತಿದ್ದ ರಮಣರು, ತಮ್ಮ ಆಶ್ರಮದಲ್ಲಿದ್ದ ಪ್ರಾಣಿ-ಪಕ್ಷಿಗಳನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು. ತಮ್ಮ ಆಶ್ರಮದಲ್ಲಿದ್ದ ಹಸು-ಕರುಗಳು, ಗುಬ್ಬಚ್ಚಿ, ನವಿಲು, ನಾಯಿಗಳು ಸೇರಿದಂತೆ ನಾನಾ ಪ್ರಾಣಿ-ಪಕ್ಷಿಗಳ ಯೋಗಕ್ಷೇಮವನ್ನು ಅವರು ತಪ್ಪದೆ ವಿಚಾರಿಸುತ್ತಿದ್ದರು. ಪ್ರಾಣಿ-ಪಕ್ಷಿಗಳನ್ನು ಅವರು 'ಅವು', 'ಇವು' ಎಂದು ಕರೆಯುತ್ತಿರಲಿಲ್ಲ. ''ಮಕ್ಕಳಿಗೆ ಅನ್ನ ಕೊಟ್ಟಿರೇ?,'' ಎಂದು ಅವರು ಕೇಳಿದರೆ, ''ನಾಯಿಗಳಿಗೆ ಊಟ ಹಾಕಿದಿರಾ?,'' ಎಂದರ್ಥ. ದೇಹತ್ಯಾಗ ಮಾಡುವ ಹಿಂದಿನ ದಿನ ಸಹ ಕೊಠಡಿಯಿಂದ ಹೊರಬಂದಿದ್ದ ಅವರು, ''ನವಿಲಿಗೆ ಊಟ ಹಾಕಿದಿರಾ?,'' ಎಂದು ತಮ್ಮ ಶಿಷ್ಯರನ್ನು ವಿಚಾರಿಸಿದ್ದರು.

ಒಂದು ಸಲ ಹಾವೊಂದು ಅವರ ಮೈಮೇಲೆ ಬಂದು ಕೂತಿತ್ತು! ಎಲ್ಲರಿಗೂ ಭಯ. ತಮ್ಮ ಗುರುಗಳಿಗೆ ಹಾವು ಏನಾದರೂ ಕೆಡುಕು ಮಾಡಬಹುದೇನೋ ಎಂಬ ಆತಂಕ ಶಿಷ್ಯರಲ್ಲಿತ್ತು. ಸ್ವಲ್ಪ ಹೊತ್ತಿನ ನಂತರ ಹಾವು ತನ್ನ ಪಾಡಿಗೆ ತಾನು ಹೊರಟು ಹೋಯಿತು. ನಂತರ ''ಹಾವು ಮೈಮೇಲೆ ಹರಿದಾಡಿದಾಗ ಏನನ್ನಿಸಿತು?,'' ಎಂದು ಕುತೂಹಲದಿಂದ ಶಿಷ್ಯರು ಕೇಳಿದರು. ಆಗ ರಮಣರು, ''ತಣ್ಣಗೆ, ಮೆತ್ತಗೆ,'' ಎಂದಿದ್ದರು. ರಮಣರ ಬದುಕಿನ ಪುಟಗಳಲ್ಲಿ ಇಂಥ ಘಟನೆಗಳು ಹತ್ತಾರು.

ಈಗ ವ್ಯಾಸರಾಯ ಮತ್ತು ಕನಕದಾಸರ ನಡುವಿನ ಘಟನೆಯನ್ನು ನೋಡೋಣ. ತಮ್ಮ ಶಿಷ್ಯರನ್ನು ಪರೀಕ್ಷಿಸಲು ವ್ಯಾಸರಾಯರು ಒಂದು ಪರೀಕ್ಷೆಯನ್ನು ನಡೆಸಿದರು. ಎಲ್ಲರಿಗೂ ಒಂದೊಂದು ಬಾಳೆಹಣ್ಣನ್ನು ನೀಡಿದ ವ್ಯಾಸರಾಯರು, ''ಯಾರೂ ನೋಡದ ಜಾಗದಲ್ಲಿ ಈ ಬಾಳೆಹಣ್ಣನ್ನು ತಿನ್ನಿ,'' ಎಂದು ಹೇಳಿದರು. ಒಬ್ಬೊಬ್ಬ ಶಿಷ್ಯನದು ಒಂದೊಂದು ಸರ್ಕಸ್. ಮಾರನೇ ದಿನ ತರಗತಿಯಲ್ಲಿ, ''ಬಾಳೆಹಣ್ಣನ್ನು ಯಾರ‌್ಯಾರು ಎಲ್ಲೆಲ್ಲಿ ತಿಂದಿರಿ?,'' ಎಂದು ವ್ಯಾಸರಾಯರು ಕೇಳಿದರು. ''ಮರದ ಕೆಳಗೆ ಯಾರೂ ಇರಲಿಲ್ಲ. ಅಲ್ಲಿ ನಾನು ಬಾಳೆಹಣ್ಣು ತಿಂದು ಮುಗಿಸಿದೆ,'' ಎಂದು ಒಬ್ಬ ಹೇಳಿದ. ''ಬಾಗಿಲು ಹಾಕಿಕೊಂಡು ಕೊಠಡಿಯಲ್ಲಿ ತಿಂದೆ. ನಾನು ತಿಂದದ್ದನ್ನು ಯಾರೂ ನೋಡಲಿಲ್ಲ!,'' ಎಂದು ಇನ್ನೊಬ್ಬ ಹೇಳಿದ. ಹೀಗೆ ಒಬ್ಬೊಬ್ಬರು ಒಂದೊಂದು ಕಡೆ ಬಾಳೆಹಣ್ಣನ್ನು ತಿಂದು ಮುಗಿಸಿದ್ದರು. ಆದರೆ, ಕನಕದಾಸರ ಕೈಯಲ್ಲಿ ಮಾತ್ರ ಬಾಳೆಹಣ್ಣು ಹಾಗೆಯೇ ಇತ್ತು. ''ನೀವೇಕೆ ಬಾಳೆಹಣ್ಣನ್ನು ತಿನ್ನಲಿಲ್ಲ?,'' ಎಂದು ವ್ಯಾಸರಾಯರು ಪ್ರಶ್ನಿಸಿದರು. ''ಗುರುಗಳೇ, ಯಾರು ಇಲ್ಲದ-ಯಾರೂ ನೋಡದ ಸ್ಥಳದಲ್ಲಿ ತಿನ್ನುವಂತೆ ನೀವು ಅಪ್ಪಣೆ ಕೊಟ್ಟಿರಿ. ಆದರೆ, ನಾನು ಎಲ್ಲಿಗೆ ಹೋದರೂ ಅಲ್ಲಿ ಒಬ್ಬ ಇದ್ದೇ ಇರುತ್ತಿದ್ದ,'' ಎಂದು ಕನಕದಾಸರು ಹೇಳಿದರು. ''ಯಾರದು?,'' ಎಂದು ವ್ಯಾಸರಾಯರು ಕೇಳಿದಾಗ, ''ದೇವರು! ಅವನಿಲ್ಲದ ಜಾಗ ಯಾವುದಿದೆ? ಹೀಗಾಗಿ ನಿಮ್ಮ ನಿಯಮದಂತೆ ಹಣ್ಣನ್ನು ತಿನ್ನಲಾಗಲಿಲ್ಲ,'' ಎಂದರು.

ಸಾಧಕರ ಬದುಕಿನ ಪುಟಗಳನ್ನು ತೆರೆಯುತ್ತಾ ಹೋದರೆ, ಇಂಥ ಹತ್ತು ಹಲವು ಪ್ರೇರಣಾದಾಯಕ ಸಂಗತಿಗಳು ಕಣ್ಮುಂದೆ ನಿಲ್ಲುತ್ತವೆ. ''ನಮ್ಮ ಮಕ್ಕಳಿಗೆ ಯಾರೀಗ ಆದರ್ಶ?,'' ಎಂದು ಯೋಚಿಸುವುದು ಬೇಕಿಲ್ಲ. ಸಾಧಕರ ಜೀವನ ಚರಿತ್ರೆಯನ್ನು ಓದುತ್ತಾ ಹೋದಂತೆ, ಒಂದು ಗಟ್ಟಿ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಅವುಗಳನ್ನು ತಲುಪಿಸುವ ಕೆಲಸ ನಡೆದರೆ ಸಾಕು.
ಕೃಪೆ - ಬೋಧಿವೃಕ್ಷ

Take Mouse over on Dharma Granth and Click Like

Like Page - www.fb.com/dharma.granth
visit - http://dharmagranth.blogspot.com/
Join to group - http://tiny.cc/Dharma-Granth-Group

.

No comments:

Post a Comment