Saturday, 16 March 2013

Bhagavad Gita Kannada http://bhagavadgitakannada.blogspot.com/

ಭಗವಂತನನ್ನು ಪುರುಷಸೂಕ್ತದಿಂದ ಉಪಾಸನೆ ಮಾಡಿದರೆ, ಅತಿಮಾನುಷ ಶಕ್ತಿ ಪ್ರಾಪ್ತಿಯಾಗಿ[ಉದಾ: ದೂರದರ್ಶನ, ದೂರಶ್ರವಣ, ಇತ್ಯಾದಿ] ಮೋಕ್ಷ ಪ್ರಾಪ್ತಿಯಾಗುತ್ತದೆ. ಋಕ್ ವಿಧಾನದಲ್ಲಿ ಹೇಳುವಂತೆ ಪುರುಷಸೂಕ್ತಕ್ಕೆ ಸಮನಾದ ಇನ್ನೊಂದು ಸೂಕ್ತವಿಲ್ಲ. ಅದು ಮಕ್ಕಳಾಗುವುದಕ್ಕೂ ಸಾಧನ, ಮೋಕ್ಷಕ್ಕೂ ಸಾಧನ. ಇಹದಿಂದ ಪರದ ತನಕ ಸಮಸ್ತ ಪುರುಷಾರ್ಥಗಳಿಗೆ ಪುರುಷಸೂಕ್ತಕ್ಕೆ ಸಮನಾದ ಇನ್ನೊಂದು ಸೂಕ್ತವಿಲ್ಲ. ಹೇಗೆ ಅಪೌರುಷೇಯ ಮಂತ್ರದಲ್ಲಿ ಪುರುಷಸೂಕ್ತಕ್ಕೆ ಇನ್ನೊಂದು ಮಂತ್ರ ಸಾಟಿ ಇಲ್ಲವೋ, ಹಾಗೇ ಇಡೀ ವೈದಿಕ ಸಾಹಿತ್ಯದಲ್ಲಿ ಪೌರುಷೇಯ ಮಂತ್ರದಲ್ಲಿ ವಿಷ್ಣುಸಹಸ್ರನಾಮಕ್ಕೆ ಸಮನಾದ ಇನ್ನೊಂದು ಮಂತ್ರವಿಲ್ಲ. ಇವೆರಡು ಮಂತ್ರವನ್ನು ಯಾರು ತಮ್ಮ ಜೀವನದಲ್ಲಿ ನಿತ್ಯ ಅಳವಡಿಸಿಕೊಂಡರೋ, ಅವರು ಭಗವಂತ ಮೆಚ್ಚುವ ಕೆಲಸ ಮಾಡುತ್ತಾರೆ, ಮಾಡಿ ಭಗವಂತನನ್ನು ಸೇರುತ್ತಾರೆ.ಒಂದು ಕಡೆ ಯಾಜ್ಞವಲ್ಕ್ಯರು ಹೇಳುತ್ತಾರೆ: “ವೀಣಾವಾದನ ತತ್ತ್ವಜ್ಞಃ ಪರಮ್ ಬ್ರಹ್ಮಾದಿಗಚ್ಛತಿ” ಎಂದು. ಅಂದರೆ “ವೀಣೆ ಬಾರಿಸಲು ಬಂದರೆ ಭಗವಂತನನ್ನು ಕಾಣುವುದು ಸುಲಭ” ಎಂದರ್ಥ! ಏಕೆಂದರೆ ವೀಣೆ ಬಾರಿಸಲು ನಾದ ಜ್ಞಾನ ಬೇಕು. ಶ್ರುತಿ, ಲಯದ ಜೊತೆಗೆ ತನ್ಮಯತೆ, ಏಕಾಗ್ರತೆ ಬೇಕು. ಅದು ಬಂದರೆ ಭಗವಂತನನ್ನು ತಿಳಿಯುವುದು ಸುಲಭ. ನಾದದ ಬಗ್ಗೆ ಹಿಂದಿನ ವೈದಿಕ ಪರಂಪರೆಯಲ್ಲಿ ಅಪಾರ ಕಾಳಜಿ ಇತ್ತು. ವೀಣಾವಾದನ ತಿಳಿದವರು ವೇದವನ್ನು ಸ್ಪಷ್ಟವಾಗಿ ಶ್ರುತಿಬದ್ಧವಾಗಿ ಹೇಳಬಲ್ಲರು. ತ್ರಿಮಾತ್ರೆ ಉಪಾಸನೆ ಅಂದರೆ ಮಂತ್ರಗಳನ್ನು, ಪದಗಳನ್ನು, ಅಕ್ಷರಗಳನ್ನು ಮತ್ತು ನಾದವನ್ನೂ ಕೂಡಾ ಭಗವಂತನಪರ ಮಾಡುವಂತಹ ‘ಮ’-ಕಾರ ವಾಚ್ಯ ಭಗವಂತನ ಉಪಾಸನೆ. ಇದು ನಿದ್ರೆಯಲ್ಲೂ ಕೂಡಾ ಭಗವಂತ ನಮಗೆ ಆನಂದವನ್ನಿತ್ತು ರಕ್ಷಿಸುತ್ತಾನೆ ಎನ್ನುವ ಉಪಾಸನೆ...ರುದ್ರ ದೇವರ ಅನುಗ್ರಹವಿಲ್ಲದೆ ಯಾವ ಸಾಧನೆಯೂ ಇಲ್ಲ. ನಾವು ಎಷ್ಟೇ ತಿಳಿದರೂ ತಿಳಿಯುವುದು ಇನ್ನೂ ಉಳಿದೇ ಇರುತ್ತದೆ. ಆದ್ದರಿಂದ ದೇವತೆಗಳೂ ಕೂಡ ಕಲ್ಪ ಕಲ್ಪದಲ್ಲಿಯೂ ತಮ್ಮ ಸಾಧನೆಯನ್ನು ಮುಂದುವರೆಸುತ್ತಲೇ ಇರುತ್ತಾರೆ. ರುದ್ರ ದೇವರು ಶೇಷ ಪದವಿಗಾಗಿ ೫೦ ಕಲ್ಪಗಳು ಸಾಧನೆ ಮಾಡುತ್ತಾರೆ. ೪೦ ಕಲ್ಪಗಳು ವಾಯುದೇವರಲ್ಲಿ ಅಭ್ಯಾಸ ಮಾಡಿ ಇನ್ನೂ ೧೦ ಕಲ್ಪ ತಾವು ಅಧ್ಯಯನ ಮಾಡಿದ ಜ್ಞಾನವನ್ನು ಲವಣ ಸಮುದ್ರದಲ್ಲಿ ಕುಳಿತು ಧ್ಯಾನ ಮಾಡಿ ಮನನ ಮಾಡಿಕೊಂಡರೆಂದು ತಿಳಿಯುತ್ತದೆ. ಇದರಿಂದ ಅವರ ಶೇಷ ಪದವಿಯ ಸಾಧನೆ ೫೦ ಕಲ್ಪಗಳು ಮತ್ತು ಈ ಸಾಧನೆಯ ನಂತರ ೧೦೦ನೆಯ ಕಲ್ಪದಲ್ಲಿ ಅವರು ಶೇಷ ಪದವಿಯನ್ನು ಪಾರ್ವತಿ ಸಹಿತವಾಗಿ ಸೇರುತ್ತಾರೆ. ಸಾಧನೆಯಲ್ಲಿ ರುದ್ರ ದೇವರು ಅತ್ಯುತ್ತಮ ಪದವಿಗೇರಿದವರು.

No comments:

Post a Comment