Thursday, 23 January 2014

Bhagavad Gita Kannada

ನಮಗೆ ಬುದ್ಧಿ, ಜ್ಞಾನ, ಅಸಮ್ಮೋಹ, ಕ್ಷಮಾ, ಸತ್ಯಂ, ದಮಃ-ಶಮಃ -ಎಲ್ಲವನ್ನು ಕೊಡುವವನು ಆ ಭಗವಂತ.
ಕೆಲವರಿಗೆ ತಾವು ತುಂಬಾ ಬುದ್ಧಿವಂತರು ಎನ್ನುವ ಭ್ರಮೆ ಇರುತ್ತದೆ. ಆದರೆ ಆ ಬುದ್ಧಿಶಕ್ತಿಯನ್ನು ಕರುಣಿಸುವವ ಭಗವಂತ ಎನ್ನುವ ಸತ್ಯವನ್ನು ಅವರು ತಿಳಿದಿರುವುದಿಲ್ಲ. ಇಲ್ಲಿ ‘ಜ್ಞಾನ’ ಎಂದರೆ ಒಂದು ವಸ್ತುವಿನ ಅರಿವು. ‘ಬುದ್ಧಿ’ ಎಂದರೆ ಏನು ಮಾಡಬೇಕು, ಏನು ಮಾಡಬಾರದು ಎನ್ನುವ ವಿವೇಕ. ನಮ್ಮಲ್ಲಿ ಬುದ್ಧಿ ಮತ್ತು ಜ್ಞಾನ ಎರಡೂ ಇದ್ದಾಗ ಮಾತ್ರ ಅದು ಪೂರ್ಣ. ಜ್ಞಾನವಿದ್ದು ಬುದ್ಧಿ ಇಲ್ಲದಿದ್ದರೆ ವೇದ ನಮ್ಮಿಂದ ದೂರವಾಗುತ್ತದೆ. “ಆಚಾರ ಹೀನಂ ನ ಪುನಂತಿ ವೇದಾಃ”-ಒಬ್ಬ ಮನುಷ್ಯ ಆಚಾರ ಹೀನನಾಗಿದ್ದರೆ ಅವನನ್ನು ಎಲ್ಲ ವೇದಗಳೂ ಕೈಬಿಡುತ್ತವೆ. ರೆಕ್ಕೆ ಬಲಿತ ಹಕ್ಕಿಮರಿಗಳು ತಮ್ಮ ಗೂಡನ್ನು ಬಿಟ್ಟು ಹಾರಿ ಹೋದಂತೆ ವೇದವಿದ್ಯೆ ಅವನನ್ನು ಬಿಟ್ಟು ಹಾರಿ ಹೋಗುತ್ತದೆ. ಆಚಾರವಂತನಾಗಿರಬೇಕು ಎಂದು ತಿಳಿದಿರುವುದು ಜ್ಞಾನ. ಆದರೆ ಯಾವುದು ಆಚಾರ-ಯಾವುದು ಅನಾಚಾರ ಎನ್ನುವ ವಿವೇಕ ಪ್ರಜ್ಞೆ-ಬುದ್ಧಿ. ಬುದ್ಧಿ-ಜ್ಞಾನದ ಜೊತೆಗೆ ಯಾವುದೇ ಸಂಶಯವಿಲ್ಲದೆ ಸತ್ಯವನ್ನು ತಿಳಿಯುವ ಗ್ರಹಣಶಕ್ತಿ ‘ಅಸಮ್ಮೋಹ’. ಇವು ಬದುಕಿನಲ್ಲಿ ನಮಗೆ ಆಸರೆಯಾಗಿರುವ ಮೂರು ಮುಖ್ಯ ಆಧಾರಸ್ಥಂಭಗಳು. ನಾವು ಇದನ್ನು ತಿಳಿದು ಆ ಭಗವಂತನನ್ನು ಉಪಾಸನೆ ಮಾಡಬೇಕು.
ನಾಲ್ಕನೇ ಗುಣ ‘ಕ್ಷಮಾ’. ಇದು ಅತ್ಯಂತ ದೊಡ್ಡ ಗುಣ. ಯಾರಾದರು ನಮ್ಮನ್ನು ಟೀಕೆ ಮಾಡಿದರೆ- ಆ ಟೀಕೆಯಲ್ಲಿ ನಮ್ಮನ್ನು ನಾವು ತಿದ್ದಿಕೊಳ್ಳುವ ಅಂಶ ಇದ್ದರೆ ತಿದ್ದಿಕೊಳ್ಳುವುದು, ಇಲ್ಲದೆ ಅದು ಕೇವಲ ಅಸೂಯೆಯ ಟೀಕೆಯಾಗಿದ್ದರೆ ಯಾವುದೇ ಪ್ರತಿಕಾರವಿಲ್ಲದೆ ವಿಷಯವನ್ನು ಅಲ್ಲೇ ಬಿಟ್ಟುಬಿಡುವುದು ‘ಕ್ಷಮಾ’.
ಐದನೇ ಗುಣ ‘ಸತ್ಯಂ’. ಸತ್ಯಮ್ ಎಂದರೆ ಪ್ರಾಮಾಣಿಕತೆ. ಇಂದು ನಾವು ಸಜ್ಜನಿಕೆಯನ್ನು ಮರೆತು ಸಜ್ಜೆನಿಕೆಯ ಮುಖವಾಡದಲ್ಲಿ ಬದುಕುತ್ತಿದ್ದೇವೆ. ಅಪ್ರಮಾಣಿಕತೆ ಎನ್ನುವುದು ನಮ್ಮ ಜೀವನವನ್ನು ಆವರಿಸಿಕೊಂಡುಬಿಟ್ಟಿದೆ. ಪ್ರಾಮಾಣಿಕತೆ ಇಲ್ಲದೆ ಯಾವ ಆಚಾರ ಸಂಪತ್ತಿದ್ದರೂ ಉಪಯೋಗವಿಲ್ಲ. ಒಬ್ಬ ವ್ಯಕ್ತಿಯ ಎದುರೊಂದು ಮತ್ತು ಹಿಂದೊಂದು ಮಾತನಾಡುವುದು ಅಪ್ರಮಾಣಿಕತೆ. ನಮಗೆ ಇನ್ನೊಬ್ಬ ವ್ಯಕ್ತಿಯ ವಿಚಾರ ಇಷ್ಟವಾಗದೆ ಇದ್ದಲ್ಲಿ ಅವರಿಗೆ ಅದನ್ನು ನೇರವಾಗಿ ಹೇಳಬಹುದು ಅಥವಾ ಅವರಿಂದ ದೂರವಿರಬೇಕು. ನಮ್ಮಲ್ಲಿ ಪ್ರಾಮಾಣಿಕತೆ ಎಲ್ಲಿಯ ತನಕ ಬೆಳೆಯುವುದಿಲ್ಲವೋ ಅಲ್ಲಿಯ ತನಕ ಯಾವ ಶಾಸ್ತ್ರವೂ ನಮ್ಮನ್ನು ಉದ್ಧಾರ ಮಾಡುವುದಿಲ್ಲ. ನಾವು ನಮಗೆ ಇಂತಹ ಪ್ರಾಮಾಣಿಕತೆ ಕೊಡು ಎಂದು ಭಗವಂತನನ್ನು ಉಪಾಸನೆ ಮಾಡಬೇಕು.
ಆರನೆಯದಾಗಿ ದಮಾಃ. ಇದು ಇಂದ್ರಿಯಗಳಿಗೆ ಸಂಬಂಧಪಟ್ಟಿದ್ದು. ನಮ್ಮ ಇಂದ್ರಿಯಗಳು ನಾವು ಹೇಳಿದಂತೆ ಕೇಳುವುದಿಲ್ಲ. ಅವು ನಮ್ಮನ್ನು ಬೇಡದ ಕಡೆ ಸೆಳೆಯುತ್ತವೆ. ಇದರಿಂದ ನೋಡಬಾರದ್ದನ್ನು ನೋಡುವುದು, ಆಡಬಾರದ್ದನ್ನು ಆಡುವುದನ್ನು ನಾವು ಮಾಡುತ್ತೇವೆ. ಇಂತಹ ಇಂದ್ರಿಯನಿಗ್ರಹ ದಮಾಃ. ಇಂದ್ರಿಯ ನಿಗ್ರಹಕ್ಕೆ ಇರುವ ಏಕಮಾತ್ರ ಮಾರ್ಗ ಭಗವಂತನಲ್ಲಿ ಶರಣಾಗತಿ.
ಏಳನೆಯ ಗುಣ ಶಮಾಃ. ನಮ್ಮ ಮನಸ್ಸು ಶಾಂತವಾಗಿರುವುದು(to be in blissfull state) ಶಮಾಃ. ಇಂದು ನಾವೆಲ್ಲರೂ ಬದುಕುತ್ತಿರುವುದು ಅಶಾಂತಿ (Tension) ಯಿಂದಲೇ! ಇದಕ್ಕೆ ಮೂಲ ಕಾರಣ ನಾವು ನಮ್ಮ ಮನಸ್ಸನ್ನು ಲೌಕಿಕ ವಿಚಾರದಲ್ಲಿ ಕೇಂದ್ರೀಕರಿಸಿ ಸಾಗುತ್ತಿರುವುದು. ಲೌಕಿಕ ವಿಚಾರವನ್ನು ಬಿಟ್ಟು, ಮನಸ್ಸನ್ನು ಭಗವಂತನ ಕಡೆಗೆ ಹರಿಸಿದಾಗ ಮನಸ್ಸು ಹಾಯಾಗುತ್ತದೆ. ಜೀವನದಲ್ಲಿ ಸಮಸ್ಯೆ ಬಂದರೆ “ದೇವರಿದ್ದಾನೆ, ಆತ ಬಿಟ್ಟು ಹಾಕುವುದಿಲ್ಲ” ಎನ್ನುವ ದೃಢನಂಬಿಕೆ ಉಳ್ಳವ ಈ ಸ್ಥಿತಿಯನ್ನು ಗಳಿಸಬಲ್ಲ. ಒಟ್ಟಿನಲ್ಲಿ 'ನಮ್ಮ ಒಳಪ್ರಪಂಚದ ಸರ್ವಸ್ವವೂ ಭಗವಂತ ಎನ್ನುವ ಪರಿಜ್ಞಾನದಿಂದ ನಾವು ಉಪಾಸನೆ ಮಾಡಬೇಕು'-ಎನ್ನುವುದು ಇಲ್ಲಿರುವ ಮೂಲ ಸಂದೇಶ...

No comments:

Post a Comment