Wednesday, 22 January 2014

Bhagavad Gita Kannada

ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ । ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿರ್ವ್ಯಶೇಮ ದೇವಹಿತಂಯದಾಯುಃ ॥

ಒಂದೊಂದು ವೇದ ಶಾಖೆಯವರಿಗೂ ಒಂದೊಂದು ಶಾಂತಿ ಮಂತ್ರವಿದೆ. ಇದು ಅಥರ್ವ ವೇದದ ಶಾಂತಿ ಮಂತ್ರ. ಅಧ್ಯಯನ ಪ್ರಾರಂಭಿಸುವ ಮೊದಲು ದೇವರನ್ನು ಪ್ರಾರ್ಥನೆ ಮಾಡಿ, “ನಿರ್ವಿಘ್ನವಾಗಿ ನಮ್ಮ ಅಧ್ಯಯನ ನಡೆಯಲಿ” ಎಂದು ಪ್ರಾರ್ಥಿಸುವ ಸ್ತೋತ್ರ ಶಾಂತಿಮಂತ್ರ. ಇಲ್ಲಿ ಜ್ಞಾನಾನಂದವನ್ನು ಕೊಡು ಎನ್ನುವ ಪ್ರಾರ್ಥನೆಯ ಜೊತೆಗೆ ವಿಶ್ವಶಾಂತಿಯ ಪ್ರಾರ್ಥನೆ ಕೂಡಾ ಇದೆ. ಹೀಗಾಗಿ ಯಾವುದೇ ಒಂದು ಅಧ್ಯಯನ ಮಾಡುವ ಮೊದಲು ಮತ್ತು ಕೊನೆಯಲ್ಲಿ ಶಾಂತಿಮಂತ್ರ ಹೇಳುವ ಕ್ರಮವಿದೆ. ಇದು ಜೀವನದಲ್ಲಿ ಅಶಾಂತಿ ಬರಬಾರದು, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶಾಂತಿಯನ್ನು ಪ್ರಾರ್ಥಿಸುವ ಮಂತ್ರ ಕೂಡಾ ಹೌದು.
“ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ”. ಇಲ್ಲಿ ‘ಯಜತ್ರಾಃ’ ಎಂದರೆ ನಮ್ಮಿಂದ ಪೂಜಿಸಲ್ಪಡುವವರು, ನಮ್ಮನ್ನು ರಕ್ಷಿಸುವವರು ಎಂದರ್ಥ. ಅದೇ ರೀತಿ ‘ದೇವಾಃ’ ಎಂದರೆ ದೇವತೆಗಳು ಮತ್ತು ಅವರ ಅಂತರ್ಯಾಮಿಯಾಗಿರುವ ಭಗವಂತ. ಅಧ್ಯಯನಕ್ಕೆ ಮೊದಲು ಗುರು-ಶಿಷ್ಯರು ಪೂಜಾರ್ಹರಾದ ತಮ್ಮ ಇಂದ್ರಿಯಾಭಿಮಾನಿ ದೇವತೆಗಳಲ್ಲಿ ಈ ರೀತಿ ಪ್ರಾರ್ಥನೆ ಮಾಡುತ್ತಿದ್ದಾರೆ: “ನೀವು ನಮ್ಮ ಕಿವಿ ಒಳ್ಳೆಯದನ್ನು ಕೇಳುವಂತೆ, ನಮ್ಮ ಕಣ್ಣು ಒಳ್ಳೆಯದನ್ನು ನೋಡುವಂತೆ ಅನುಗ್ರಹಿಸಿ” ಎಂದು. ಎಲ್ಲಕ್ಕಿಂತ ಒಳ್ಳೆಯ ಸುದ್ದಿ ಎಂದರೆ ಅದು ದೇವರ ಸುದ್ದಿ. ಒಳ್ಳೆಯದನ್ನು ಕೇಳುವುದು ಎಂದರೆ ಮೊದಲು ಭಗವಂತನ ಬಗೆಗೆ ಕೇಳುವುದು. ನಂತರ ಲೋಕದಲ್ಲಿನ ಒಳ್ಳೆಯ ಸುದ್ದಿಯನ್ನು ಕೇಳುವುದು. ಸಾಮಾನ್ಯವಾಗಿ ಲೋಕದಲ್ಲಿನ ಕೆಟ್ಟ ವಿಷಯ ಕಿವಿಯ ಮೇಲೆ ಬಿದ್ದಾಗ, ಕೆಟ್ಟ ದೃಶ್ಯವನ್ನು ನೋಡಿದಾಗ ಮನಸ್ಸು ಕದಡುತ್ತದೆ. ಅದರಿಂದ ಕೊಪ, ದ್ವೇಷ ಬೆಳೆಯುತ್ತಾ ಹೋಗುತ್ತದೆ. ಅದಕ್ಕಾಗಿ ‘ಕೆಟ್ಟ ವಿಷಯ ಕಿವಿಯ ಮೇಲೆ ಬೀಳದಿರಲಿ, ಕೆಟ್ಟ ದೃಶ್ಯ ಕಣ್ಣಿಗೆ ಕಾಣದಿರಲಿ’ ಎನ್ನುವ ಪ್ರಾರ್ಥನೆ ಇಲ್ಲಿದೆ.
“ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿರ್ವ್ಯಶೇಮ ದೇವಹಿತಂಯದಾಯುಃ”. “ನಾವು ಬದುಕ್ಕಿದ್ದಾಗ ನಮಗೆ ಆರೋಗ್ಯವಂತ ಮತ್ತು ಗಟ್ಟಿಮುಟ್ಟಾದ ಇಂದ್ರಿಯ ಮತ್ತು ಶರೀರವನ್ನು ಕೊಡು” ಎಂದು ಇಲ್ಲಿ ಪ್ರಾರ್ಥಿಸುತ್ತಾರೆ. ಬದುಕಿರುವಷ್ಟು ಕಾಲ ಇನ್ನೊಬ್ಬರಿಗೆ ಭಾರವಾಗಿ ಬದುಕಿಸಬೇಡ, ಸಾಯುವ ತನಕ ಭಗವಂತನ ಧ್ಯಾನ ಮಾಡುತ್ತಾ, ಜಾಗೃತವಾದ ಮನಸ್ಸಿನಲ್ಲಿ ಭಗವಂತನ ಗುಣಗಳ ಅನುಸಂಧಾನ ಮಾಡುತ್ತಾ, ದೇವರು ಮೆಚ್ಚುವ ಬದುಕನ್ನು ಬಾಳಬೇಕು. ಅದಕ್ಕಾಗಿ “ಓ ತತ್ತ್ವಾಭಿಮಾನಿ ದೇವತೆಗಳೇ ನಮಗೆ ಆರೋಗ್ಯವಂತ ಶರೀರವನ್ನು ಕೊಟ್ಟು ಅನುಗ್ರಹಿಸಿ” ಎಂದು ಇಲ್ಲಿ ಪ್ರಾರ್ಥಿಸಿದ್ದಾರೆ.
ಇಲ್ಲಿ ಶರೀರಗಳು(ತನೂಭಿಃ) ಎಂದು ಬಹುವಚನ ಉಪಯೋಗಿಸಿ ಪ್ರಾರ್ಥಿಸಿರುವುದನ್ನು ಕಾಣುತ್ತೇವೆ. ಇದರ ಹಿಂದೆ ಎರಡು ಅರ್ಥವಿದೆ. “ಜನ್ಮಜನ್ಮಗಳಲ್ಲೂ ಆರೋಗ್ಯವಂತ ಶರೀರ ಕೊಡು” ಎನ್ನುವುದು ಒಂದರ್ಥವಾದರೆ, “ಪ್ರಾರ್ಥಿಸುತ್ತಿರುವ ಎಲ್ಲರಿಗೂ ಆರೋಗ್ಯವಂತ ದೇಹ ಕೊಡು” ಎನ್ನುವುದು ಇನ್ನೊಂದು ಅರ್ಥ. ಒಟ್ಟಿನಲ್ಲಿ ಹೇಳಬೇಕೆಂದರೆ: “ಒಳ್ಳೆಯದನ್ನು ಕೇಳಿಸು, ಒಳ್ಳೆಯದನ್ನು ನೋಡುವಂತೆ ಮಾಡು, ಉಸಿರಿರುವಷ್ಟು ಕಾಲ ದೇವರು ಮೆಚ್ಚುವ ಬದುಕನ್ನು ಪರಾಧೀನನಾಗದೇ ಬದುಕುವಂತೆ ಮಾಡು” ಎನ್ನುವುದು ಇಲ್ಲಿರುವ ಮೂಲ ಪ್ರಾರ್ಥನೆ...

No comments:

Post a Comment