ಕಲ್ಪವೃಕ್ಷಕ್ಕೆ ಹಿತವಾವುದು, ಅಹಿತವಾವುದೆಂದು ತಿಳಿಯದು. ಬಯಸಿದ್ದನ್ನು ಕೊಡಬಲ್ಲದು ಆದರೆ ಬಯಸಿದ್ದೆಲ್ಲವನ್ನೂ ಕೊಡಲಾರದ್ದು. ಹೊಟ್ಟೆ ತುಂಬಾ ಊಟ ಮಾಡಿರುವ ಮಗು ಮತ್ತೆ ಸಿಹಿ ತಿಂಡಿ ಅಥವಾ ಭಕ್ಷ್ಯಗಳನ್ನು ಕೇಳಿದರೆ, ತಾಯಿ ಆಮೇಲೆ ಕೊಡುವೆನೆಂದು ಹೇಳುವುದು ಅದರ ಆರೋಗ್ಯ ಕೆಡಬಾರದೆಂಬ ಒಂದೇ ಒಂದು ಕಾಳಜಿಯಿಂದ ಮಾತ್ರ. ಅದೇ ರೀತಿ ಭಗವಂತ ಕೂಡ ಕೆಲವೊಮ್ಮೆ ನಾವು ಕೇಳಿದ ಎಲ್ಲವನ್ನೂ ನಮಗೆ ಯೋಗ್ಯತೆ ಇದ್ದರೂ ಕೂಡ ಕೊಡುವುದಿಲ್ಲ. ಇತರ ದೇವತೆಗಳಂತೆ ಶ್ರೀಹರಿ ಅಷ್ಟು ಬೇಗ ಒಲಿಯುವುದಿಲ್ಲ, ಅವನು ತನ್ನ ಭಕ್ತರಾದ ಸಾತ್ವಿಕರ ಸತ್ವಗುಣ ಅಭಿವೃದ್ಧಿಯಾಗಲೆಂದು ಕಾಯುತ್ತಾನೆ. ಏಕೆಂದರೆ ಜೀವರು ಸಂಸಾರದಲ್ಲಿ ಅಜ್ಞಾನಿಗಳು, ತಮಗೆ ಯಾವುದು ಹಿತವೆಂದು ತಿಳಿಯದವರು. ಎಲ್ಲವನ್ನೂ ಬೇಡುವ ಭರಾಟೆಯಲ್ಲಿ ಅಹಿತವನ್ನೂ ಬೇಡಿಬಿಡುವರು. ಆದ್ದರಿಂದ ಶ್ರೀಹರಿ ಬೇಡಿದುದನ್ನೆಲ್ಲವನ್ನೂ ಕಣ್ಮುಚ್ಚಿ ಪೂರೈಸುವುದಿಲ್ಲ ಮತ್ತು ಈಡೇರಿಸಿದ ಲೌಕಿಕ ಪುರುಷಾರ್ಥಗಳಿಂದ ಭಕ್ತ ತನ್ನಿಂದ ವಿಮುಖನಾಗಬಾರದೆಂಬ ಕಾಳಜಿಯಿಂದ, ತಾಯಿಯಂತೆ ಪೊರೆವನು ಎಂದು ತಿಳಿಯಬೇಕು. ಶ್ರೀಹರಿ ಎಂದಿಗೂ ತಾಮಸರಿಗೆ ಒಲಿಯುವುದೇ ಇಲ್ಲ. ಭಗವಂತ ಕೇವಲ ಮೋಕ್ಷವನ್ನಷ್ಟೇ ಕೊಡುವುದಿಲ್ಲ, ಮೋಕ್ಷ ಸಾಧನೆಗೆ ಪೂರಕವಾದ ವಿಷಯ ಸುಖವನ್ನೂ, ಸುಸ್ಥಿತವಾದ ದೇಹವನ್ನೂ, ಅವನ ಪಾದದಲ್ಲಿ ನೆಲೆಸುವಂತಹ ಮನಸ್ಸನ್ನೂ ಕೂಡ ಕೊಟ್ಟು, ಸಲಹುತ್ತಾನೆ, ಸಾಧನೆಗೆ ಅವಕಾಶ ಮಾಡಿಕೊಡುತ್ತಾನೆಂಬ ವಿಚಾರವನ್ನು ಸ್ಪಷ್ಟ ಪಡಿಸುವುದಕ್ಕಾಗಿ ಇಲ್ಲಿ ’ಕಲ್ಪವೃಕ್ಷ’ದ ದೃಷ್ಟಾಂತವನ್ನು ಕೊಡಲಾಗಿದೆ. ಕಲ್ಪವೃಕ್ಷ ಕೂಡ ಕೇವಲ ವಿಷಯ ಸುಖಗಳನ್ನು ಮಾತ್ರ ಕರುಣಿಸಬಲ್ಲದೆಂದೂ, ಮೋಕ್ಷ ಕೊಡಲಾರದೆಂದೂ ತಿಳಿಯಬಾರದು, ಅದು ತತ್ವಜ್ಞಾನವನ್ನೂ ಕೊಡಬಲ್ಲಂತಹದು. ಹರಿ ಎಂದಿಗೂ ತನ್ನಲ್ಲಿ ಶರಣಾಗತರಾದ ತ್ರಿವಿಧ ಜೀವರಿಗೆ ಮಾತ್ರವೇ ಎಲ್ಲಾ ಲೋಕಗಳಲ್ಲೂ ಕಲ್ಪವೃಕ್ಷದಂತೆ ಅಪೇಕ್ಷಿತವಾದ ಸುಖವನ್ನು ನೀಡುತ್ತಾನಾದ್ದರಿಂದಲೇ ಅವನು ’ಶರಣಜನ’ ಎನಿಸಿಕೊಳ್ಳುತ್ತಾನೆ. ತನ್ನನ್ನು ದ್ವೇಷಿಸುವವರಿಗೆ ಅವನು ಎಂದಿಗೂ, ಏನನ್ನೂ ನೀಡುವುದಿಲ್ಲ.
source - harikathaamruthasara.blogspot.in
Like - www.fb.com/dharma.granth
Visit - http://dharmagranth.blogspot.in/
Subscribe Email - http://tiny.cc/Dharma-Granth-Group
.
source - harikathaamruthasara.blogspot.in
Like - www.fb.com/dharma.granth
Visit - http://dharmagranth.blogspot.in/
Subscribe Email - http://tiny.cc/Dharma-Granth-Group
.
No comments:
Post a Comment