Monday, 18 November 2013

ದೃಷ್ಟಿಯನ್ನು ಹೇಗೆ ತೆಗೆಯಬೇಕು?

ದೃಷ್ಟಿಯನ್ನು ಹೇಗೆ ತೆಗೆಯಬೇಕು? 
ದೃಷ್ಟಿಯನ್ನು ತೆಗೆಯುವಾಗ ಮಾಡಬೇಕಾದ ಕೃತಿಗಳನ್ನು ಮುಂದೆ ಕೊಡಲಾಗಿದೆ. ಇದರಲ್ಲಿನ ಹೆಚ್ಚಿನ ಕೃತಿಗಳ ಹಿಂದಿನ ಶಾಸ್ತ್ರವನ್ನು ಗ್ರಂಥದಲ್ಲಿ ಕೊಡಲಾಗಿದೆ. ೧. ದೃಷ್ಟಿ ತಗಲಿರುವ ವ್ಯಕ್ತಿಯನ್ನು ಮಣೆಯ ಮೇಲೆ ಕೂರಿಸಬೇಕು. ೨. ದೃಷ್ಟಿಯನ್ನು ತೆಗೆಯುವ ಮೊದಲು ಪ್ರಾರ್ಥನೆಯನ್ನು ಮಾಡಬೇಕು. ಅ. ದೃಷ್ಟಿ ತಗಲಿದ ವ್ಯಕ್ತಿಯು ಉಪಾಸ್ಯದೇವತೆಗೆ ಮುಂದಿನಂತೆ ಪ್ರಾರ್ಥನೆಯನ್ನು ಮಾಡಬೇಕು: ನನ್ನ ಶರೀರದಲ್ಲಿನ ಹಾಗೂ ನನ್ನ ಶರೀರದ ಹೊರಗಿನ ತ್ರಾಸದಾಯಕ ಸ್ಪಂದನಗಳನ್ನು ‘ದೃಷ್ಟಿಯನ್ನು ತೆಗೆಯಲು ಉಪಯೋಗಿಸುವ ವಸ್ತುಗಳು ಸೆಳೆದುಕೊಳ್ಳಲಿ ಮತ್ತು ಅವು ಸಂಪೂರ್ಣ ನಾಶವಾಗಲಿ.’ ಆ. ದೃಷ್ಟಿ ತೆಗೆಯುವ ವ್ಯಕ್ತಿಯು ಉಪಾಸ್ಯದೇವತೆಗೆ ಮುಂದಿನಂತೆ ಪ್ರಾರ್ಥನೆಯನ್ನು ಮಾಡಬೇಕು: ದೃಷ್ಟಿ ತಗಲಿದ ಜೀವದ ದೇಹದಲ್ಲಿನ ಮತ್ತು ದೇಹದ ಹೊರಗಿನ ತ್ರಾಸದಾಯಕ ಸ್ಪಂದನಗಳನ್ನು ‘ದೃಷ್ಟಿಯನ್ನು ತೆಗೆಯಲು ಉಪಯೋಗಿಸುವ ವಸ್ತುಗಳು ಸೆಳೆದುಕೊಳ್ಳಲಿ ಮತ್ತು ಅವು ಸಂಪೂರ್ಣವಾಗಿ ನಾಶವಾಗಲಿ. ದೃಷ್ಟಿಯನ್ನು ತೆಗೆಯುವಾಗ ನಿನ್ನ ಕೃಪೆಯಿಂದ ನನ್ನ ಸುತ್ತಲೂ ಸಂರಕ್ಷಣಾ ಕವಚವು ನಿರ್ಮಾಣವಾಗಲಿ.’ ೩. ದೃಷ್ಟಿಯನ್ನು ತೆಗೆಸಿಕೊಳ್ಳುವ ವ್ಯಕ್ತಿಯು ಮಣೆಯ ಮೇಲೆ ಕುಳಿತುಕೊಳ್ಳುವ ಹಾಗೂ ಎರಡೂ ಕೈಗಳನ್ನಿಡುವ ಪದ್ಧತಿ: ಚಿತ್ರವನ್ನು ನೋಡಿ. ೪. ದೃಷ್ಟಿಯನ್ನು ತೆಗೆಯುವ ವ್ಯಕ್ತಿಯು ಮಾಡಬೇಕಾದ ಕೃತಿಗಳು ಅ. ಉಪ್ಪು-ಸಾಸಿವೆ, ಉಪ್ಪು-ಸಾಸಿವೆ-ಕೆಂಪು ಮೆಣಸಿನಕಾಯಿ, ಲಿಂಬೆಕಾಯಿ, ತೆಂಗಿನಕಾಯಿ ಇತ್ಯಾದಿ ವಿವಿಧ ವಸ್ತುಗಳನ್ನು ದೃಷ್ಟಿ ತೆಗೆಯಲು ಉಪಯೋಗಿಸುತ್ತಾರೆ. (ಈ ವಸ್ತುಗಳ ಬಗೆಗಿನ ಸವಿಸ್ತಾರವಾದ ಮಾಹಿತಿಯನ್ನು ಹಾಗೂ ಅವುಗಳಿಂದ ದೃಷ್ಟಿಯನ್ನು ತೆಗೆಯುವ ಪದ್ಧತಿಗಳನ್ನು ಗ್ರಂಥದಲ್ಲಿ ಆಯಾ ವಸ್ತುಗಳ ಮಾಹಿತಿಯಲ್ಲಿ ಕೊಡಲಾಗಿದೆ.) ಯಾವ ವಸ್ತುಗಳಿಂದ ದೃಷ್ಟಿಯನ್ನು ತೆಗೆಯುವುದಿದೆಯೋ, ಆ ವಸ್ತುಗಳನ್ನು ಕೈಯಲ್ಲಿ ಹಿಡಿದುಕೊಂಡು ದೃಷ್ಟಿ ತಗಲಿದ ವ್ಯಕ್ತಿಯ ಮುಂದೆ ನಿಂತುಕೊಳ್ಳಬೇಕು. ಆ. ‘ಬಂದವರ-ಹೋದವರ, ದಾರಿಹೋಕರ, ಪಶು-ಪಕ್ಷಿಗಳ, ದನಕರುಗಳ, ಭೂತ-ಪ್ರೇತಗಳ, ರಾಕ್ಷಸರ, ಮಾಟ-ಮಂತ್ರ ಮಾಡುವವರ ಮತ್ತು ಈ ಜಗತ್ತಿನಲ್ಲಿರುವ ಯಾವುದೇ ಶಕ್ತಿಯ ದೃಷ್ಟಿಯು ತಗಲಿದ್ದರೆ ಅದು ದೂರವಾಗಲಿ’ ಎನ್ನುತ್ತಾ ದೃಷ್ಟಿ ತೆಗೆಯುವ ವಸ್ತುಗಳಿಂದ ತೊಂದರೆಯಿರುವ ವ್ಯಕ್ತಿಯ ಮೇಲಿನಿಂದ ಸಾಮಾನ್ಯವಾಗಿ ೩ ಸಲ ನಿವಾಳಿಸಬೇಕು. (ವಸ್ತುಗಳನ್ನು ನಿವಾಳಿಸುವ ಪದ್ಧತಿಯು, ಆಯಾ ವಸ್ತುಗಳಿಗನುಸಾರ ಸ್ವಲ್ಪ ಬೇರೆಯಾಗಿರುತ್ತದೆ. ಈ ಪದ್ಧತಿಯನ್ನು ಗ್ರಂಥದಲ್ಲಿ ಆಯಾ ವಸ್ತುಗಳ ಮಾಹಿತಿಯಲ್ಲಿ ಕೊಡಲಾಗಿದೆ.) ಇ. ದೃಷ್ಟಿಯನ್ನು ತೆಗೆಯುವ ವಸ್ತುಗಳನ್ನು ನಿವಾಳಿಸುವಾಗ ಪ್ರತಿಯೊಂದು ಸಲ ಕೈಗಳನ್ನು ಭೂಮಿಗೆ ತಗಲಿಸಬೇಕು. (ಹೀಗೆ ಮಾಡುವುದರಿಂದ ಆ ವಸ್ತುಗಳು ಸೆಳೆದುಕೊಂಡ ತ್ರಾಸದಾಯಕ ಸ್ಪಂದನಗಳನ್ನು ಭೂಮಿಯಲ್ಲಿ ವಿಸರ್ಜನೆ ಮಾಡಲು ಸಹಾಯವಾಗುತ್ತದೆ.) ಈ. ವ್ಯಕ್ತಿಗೆ ತೊಂದರೆಗಳು ಹೆಚ್ಚಿದ್ದಲ್ಲಿ ವಸ್ತುಗಳನ್ನು ಮೂರಕ್ಕಿಂತ ಹೆಚ್ಚು ಸಲ ನಿವಾಳಿಸಬೇಕು. ಬಹಳಷ್ಟು ಸಲ ಮಾಂತ್ರಿಕರು ೩, ೫, ೭ ಅಥವಾ ೯ ಹೀಗೆ ಬೆಸ ಸಂಖ್ಯೆಗಳಲ್ಲಿ ಮಾಟವನ್ನು ಮಾಡುತ್ತಾರೆ; ಆದುದರಿಂದ ಆದಷ್ಟು ಬೆಸಸಂಖ್ಯೆಗಳಲ್ಲಿ ವಸ್ತುಗಳನ್ನು ನಿವಾಳಿಸಬೇಕು. ಉ. ದೊಡ್ಡ ಕೆಟ್ಟ ಶಕ್ತಿಗಳ ತೊಂದರೆಯಿದ್ದರೆ ೨-೩ ಸಲ ದೃಷ್ಟಿ ತೆಗೆದರೂ ತೊಂದರೆಯು ಕಡಿಮೆಯಾಗುವುದಿಲ್ಲ. ಇಂತಹ ಸಮಯದಲ್ಲಿ ತೊಂದರೆಯಿರುವ ವ್ಯಕ್ತಿಯ ಮುಂದಿನಿಂದ ನಿವಾಳಿಸಿದ ನಂತರ, ಅವನ ಹಿಂದಿನಿಂದಲೂ ನಿವಾಳಿಸಬೇಕು. (ಸಾಮಾನ್ಯ ಭೂತಗಳಿದ್ದಲ್ಲಿ ಮುಂದಿನಿಂದ ನಿವಾಳಿಸಿದರೂ ಸಾಕಾಗುತ್ತದೆ. ದೊಡ್ಡ ಕೆಟ್ಟ ಶಕ್ತಿಗಳು ಶರೀರದ ಹಿಂಭಾಗದಲ್ಲಿ ಸ್ಥಾನಗಳನ್ನು ಮಾಡುತ್ತವೆ, ಆದುದರಿಂದ ದೃಷ್ಟಿ ತೆಗೆಯುವಾಗ ಎರಡೂ ಕಡೆಗಳಿಂದ ತೆಗೆಯಬೇಕು.) ಊ. ದೃಷ್ಟಿಯನ್ನು ತೆಗೆದು, ದೃಷ್ಟಿಯನ್ನು ತೆಗೆದ ವಸ್ತುಗಳನ್ನು ತೆಗೆದುಕೊಂಡು ಹೋಗುವಾಗ ಹಿಂತಿರುಗಿ ನೋಡಬಾರದು. ೫. ದೃಷ್ಟಿಯನ್ನು ತೆಗೆದ ಮೇಲೆ, ದೃಷ್ಟಿಯನ್ನು ತೆಗೆದವನು ಮತ್ತು ದೃಷ್ಟಿಯನ್ನು ತೆಗೆಸಿಕೊಂಡವನು, ಯಾರೊಂದಿಗೂ ಮಾತನಾಡದೇ ೧೫-೨೦ ನಿಮಿಷಗಳ ಕಾಲ ಮನಸ್ಸಿನಲ್ಲಿ ನಾಮಜಪ ಮಾಡುತ್ತಾ ಮುಂದಿನ ಕರ್ಮಗಳನ್ನು ಮಾಡಬೇಕು. ೬. ಯಾವ ವಸ್ತುಗಳಿಂದ ದೃಷ್ಟಿಯನ್ನು ತೆಗೆಯಲಾಗಿದೆಯೋ, ಆ ವಸ್ತುಗಳಲ್ಲಿ ಸೆಳೆದುಕೊಂಡಿರುವ ತ್ರಾಸದಾಯಕ ಶಕ್ತಿಯನ್ನು ನಾಶಗೊಳಿಸುವ ಪದ್ಧತಿಯು ಆಯಾ ವಸ್ತುಗಳಿಗನುಸಾರ ವಿಭಿನ್ನವಾಗಿರುತ್ತದೆ, ಉದಾ. ಮೆಣಸಿನಕಾಯಿ ಮತ್ತು ಲಿಂಬೆಕಾಯಿಯನ್ನು ಸುಡಬೇಕು, ತೆಂಗಿನಕಾಯಿಯನ್ನು ಮಾರುತಿಯ ದೇವಸ್ಥಾನದಲ್ಲಿ ಒಡೆಯಬೇಕು ಅಥವಾ ನೀರಿನಲ್ಲಿ ವಿಸರ್ಜನೆ ಮಾಡಬೇಕು. (ಸವಿಸ್ತಾರವಾದ ಮಾಹಿತಿಯನ್ನು ಗ್ರಂಥದಲ್ಲಿ ಕೊಡಲಾಗಿದೆ.) ೭. ದೃಷ್ಟಿಯನ್ನು ತೆಗೆದವನು ಮತ್ತು ತೆಗೆಸಿಕೊಂಡವನು ಕೈ-ಕಾಲುಗಳನ್ನು ತೊಳೆದುಕೊಳ್ಳ ಬೇಕು, ಮೈಮೇಲೆ ಗೋಮೂತ್ರ ಅಥವಾ ವಿಭೂತಿಯ ನೀರನ್ನು ಸಿಂಪಡಿಸಿಕೊಳ್ಳಬೇಕು, ದೇವರ ಅಥವಾ ಗುರುಗಳ ಸ್ಮರಣೆಯನ್ನು ಮಾಡಿ, ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿ ವಿಭೂತಿಯನ್ನು ಹಚ್ಚಿಕೊಳ್ಳಬೇಕು ಹಾಗೂ ತಮ್ಮ ಮುಂದಿನ ಕರ್ಮಗಳನ್ನು ಮಾಡಬೇಕು. ೮. ತೀವ್ರ ತೊಂದರೆಯಿದ್ದರೆ ಸತತವಾಗಿ ಮೂರು-ನಾಲ್ಕು ಸಲ ಅಥವಾ ಗಂಟೆಗೊಂದು ಸಲ ಅಥವಾ ದಿನದಲ್ಲಿ 3-4 ಸಲ ದೃಷ್ಟಿಯನ್ನು ತೆಗೆಯಬೇಕು. (ಹೆಚ್ಚಿನ ಮಾಹಿತಿಗಾಗಿ ಸನಾತನ ಸಂಸ್ಥೆಯ ಗ್ರಂಥ ‘ದೃಷ್ಟಿ ತಗಲುವುದು ಮತ್ತು ತೆಗೆಯುವುದರ ಹಿಂದಿನ ಶಾಸ್ತ್ರ’ವನ್ನು ಓದಿ.)

Original Post from: http://dharmagranth.blogspot.in/2012/10/blog-post_1745.html
© Sanatan Sanstha - All Rights Reserved

No comments:

Post a Comment