Saturday, 12 October 2013

Bhagavad Gita Kannada - “ಸಂಕಲ್ಪ ಮತ್ತು ವಿಕಲ್ಪ ಎನ್ನುವುದು ಮನಸ್ಸಿನ ಕರ್ಮಗಳು” .

“ಸಂಕಲ್ಪ ಮತ್ತು ವಿಕಲ್ಪ ಎನ್ನುವುದು ಮನಸ್ಸಿನ ಕರ್ಮಗಳು” .
ಮನುಷ್ಯನ ಬದುಕೆಲ್ಲಾ ಆಸೆಗಳ ಸರಮಾಲೆ(ಸಂಕಲ್ಪ-Desire). ಏನೇನನ್ನೋ ಬಯಸುವುದು, ನಂತರ ಯಾವುದು ಬೇಕು, ಯಾವುದು ಬೇಡ ಎಂದು ತಿಳಿಯದೆ ಗೊಂದಲಕ್ಕೊಳಗಾಗುವುದು(ವಿಕಲ್ಪ-Confusion). ಖಚಿತವಾದ ತಿಳುವಳಿಕೆ ಇಲ್ಲದೇ ಇರುವುದರಿಂದ ಎಲ್ಲವೂ ಗೊಂದಲ. ನಮ್ಮ ಇಂದಿನ ಅನುಷ್ಠಾನಗಳೂ ಕೂಡಾ ಹೀಗೆ. ಅವು ಬುದ್ಧಿಯಿಂದ ಬಂದವುಗಳಲ್ಲ. ಅವು ಕೇವಲ ಮನಸ್ಸಿನ ಗೊಂದಲಗಳು.
ಉದಾಹರಣೆಗೆ-ಕೆಲವು ಕಡೆ ಕೆಲವು ಆಚರಣೆಗಳಿರುತ್ತವೆ. ಅವುಗಳಿಗೆ ಶಾಸ್ತ್ರದ ಆಧಾರ ಇರುವುದಿಲ್ಲ. ಆದರೆ ಒಬ್ಬರು ಮಾಡುವುದನ್ನು ನೋಡಿ ಇನ್ನೊಬ್ಬರು ಮಾಡುತ್ತಾರೆ. ಮಾಡದಿದ್ದರೆ ಏನಾಗುತ್ತದೋ ಎನ್ನುವ ಭಯದಿಂದ ಮತ್ತೊಬ್ಬರು ಅದನ್ನು ಅನುಸರಿಸುತ್ತಾರೆ! ಈ ರೀತಿ ಇಂದು ನಾವು ಮಾಡುವ ಧಾರ್ಮಿಕ ಕ್ರಿಯೆಗಳೂ ಕೂಡಾ ಬರೀ ಗೊಂದಲದ ಗೂಡಾಗುತ್ತಿದೆ. ಅಲ್ಲಿ ಖಚಿತವಾದ ತೀರ್ಮಾನವಿರುವುದಿಲ್ಲ. ಇದರಿಂದಾಗಿ ಯಾವುದು ನಿಜವಾದ ಧರ್ಮ ಎನ್ನುವ ತಿಳುವಳಿಕೆ ಇಲ್ಲದೆ, ಸ್ವಚ್ಛವಾದ ಅನುಷ್ಠಾನವಿಲ್ಲದೆ, ಧರ್ಮಪ್ರಜ್ಞೆಯೇ ಇಲ್ಲದೆ, ಗೊಂದಲದಲ್ಲಿ ನಾವು ಬದುಕುತ್ತಿರುತ್ತೇವೆ.

ಕೆಲವೊಮ್ಮೆ ಯಾವುದು ಸರಿ, ಯಾವುದು ತಪ್ಪು ಎನ್ನುವುದು ತಿಳಿದಿದ್ದರೂ ಕೂಡಾ, ನಮ್ಮ ಮನಸ್ಸು ನಮ್ಮನ್ನು ಬೇಡವಾದ ಕಡೆಗೇ ಎಳೆದೊಯ್ಯುತ್ತದೆ. ಇದಕ್ಕೆ ಕಾರಣ ನಾವು ನಮ್ಮ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳು. ಆ ಕರ್ಮಫಲಕ್ಕನುಗುಣವಾಗಿ ನಾವು ದಾರಿ ತಪ್ಪುತ್ತೇವೆ.

“ಅಶುಭದ ಕಡೆಗೆ ಹೊಗುವ ಮನಸ್ಸನ್ನು ಶುಭದತ್ತ ತಿರುಗಿಸು”
ಎಲ್ಲಕ್ಕಿಂತ ಪವಿತ್ರವಾದುದು, ಎಲ್ಲಕ್ಕಿಂತ ಮಂಗಳವಾದುದು ಎಂದರೆ ಭಗವಂತ. ಅದೇ ಶುಭ. ನಾವು ನಮ್ಮ ಮನಸ್ಸಿನಲ್ಲಿ ತುಂಬಿರುವ ಕೊಳೆಯನ್ನು ತೊಳೆದು, ಅಲ್ಲಿ ಶುಭ್ರವಾದ ಭಗವಂತನನ್ನು ತುಂಬಿಸುವ ಪ್ರಯತ್ನ ಮಾಡಬೇಕು. ಒಳಗಿರುವ ಕೊಳೆಯನ್ನು ತೊಳೆಯದೇ ಒಳ್ಳೆಯದನ್ನು ತುಂಬಿಸುವ ಪ್ರಯತ್ನ ಕೆಸರಿನ ಪಾತ್ರೆಗೆ ಹಾಲನ್ನು ತುಂಬಿಸಿದಂತೆ ವ್ಯರ್ಥವಾಗುತ್ತದೆ. ಹಾಗಾಗಿ ಮೊದಲು ವಿವೇಕದಿಂದ ಮನಸ್ಸನ್ನು ಸ್ವಚ್ಛಗೊಳಿಸಿ, ಸ್ವಚ್ಛವಾದ ಮನಸ್ಸಿನಿಂದ ಮಾಂಗಲಿಕವಾದ ಭಗವಂತನ ಚಿಂತನೆ ಮಾಡಬೇಕು.

No comments:

Post a Comment