Saturday, 6 April 2013

GAYATRI - Bhagavad Gita Kannada

ಓಂಕಾರ ಒಂದು ಬೀಜಾಕ್ಷರ. ಈ ಬೀಜಾಕ್ಷರವನ್ನು ಬಿಡಿಸಿದರೆ ಅದು ಸಮಸ್ತ ಭಾರತೀಯ ತತ್ತ್ವ ಶಾಸ್ತ್ರವನ್ನು ತನ್ನ ಗರ್ಭದಲ್ಲಿ ಧರಿಸಿದೆ ಎನ್ನುವುದು ನಮಗೆ ತಿಳಿಯುತ್ತದೆ. ವೇದದ ಸಾರ 'ಓಂಕಾರ'-ಅದೇ ಪ್ರಣವಃ.
ವೇದಗಳು ಅನೇಕ. ಋಗ್ವೇದದಲ್ಲಿ 24 ಶಾಖೆ, ಯಜುರ್ವೇದದಲ್ಲಿ 101 ಶಾಖೆ, ಸಾಮವೇದದಲ್ಲಿ 1000 ಶಾಖೆ, ಅಥರ್ವವೇದದಲ್ಲಿ 12 ಶಾಖೆ. ಹೀಗೆ ಒಟ್ಟು 1137 ಸಂಹಿತೆಗಳು. ಅದಕ್ಕೆ ಅಷ್ಟೇ ಬ್ರಾಹ್ಮಣಗಳು, ಅರಣ್ಯಕಗಳು, ಉಪನಿಷತ್ತುಗಳು. ಹೀಗೆ ವೇದವೆಂದರೆ ವಿಪುಲವಾದ ವೈದಿಕ ವಾಙ್ಮಯ. ಎಷ್ಟೇ ವೇದಗಳಿದ್ದರೂ ಕೂಡಾ, ಮೂಲತಃ ವೇದದಲ್ಲಿ ಪ್ರಮುಖವಾದ ಮೂರು ವಿಭಾಗವಿದೆ. ಪದ್ಯರೂಪ(ಋಗ್ವೇದ), ಗದ್ಯರೂಪ(ಯಜುರ್ವೇದ) ಮತ್ತು ಗಾನರೂಪ(ಸಾಮವೇದ). ಈ ಮೂರು ವೇದಗಳ, ಮೂರು ಅಕ್ಷರಗಳನ್ನು ತೆಗೆದುಕೊಂಡು ನಿರ್ಮಾಣವಾಗಿರುವುದು ಓಂಕಾರ.
“ಓಂಕಾರಕ್ಕೆ ಸಾರತ್ವವನ್ನು ಕೊಟ್ಟು ಸಾರಭೂತನಾಗಿ ‘ಪ್ರಣವಃ’ ಶಬ್ದವಾಚ್ಯನಾಗಿ ನಾನು ಓಂಕಾರದಲ್ಲಿ ನೆಲೆಸಿದ್ದೇನೆ” ಎಂದು ಗೀತೆಯಲ್ಲಿ ಸ್ವಯಂ ಭಗವಂತನೇ ಹೇಳಿದ್ದಾನೆ(ಗೀತಾ-೭-೦೮). ಇದು ಬಹಳ ವಿಚಾರಗರ್ಭಿತ ಸಂಗತಿ. ಪ್ರಾಚೀನರು ಮೂರು ವೇದಗಳನ್ನು ಭಟ್ಟಿ ಇಳಿಸಿ, ಅದರ ಸಾರವಾದ ಮೂರು ವರ್ಗಗಳ ಒಂದು ಸೂಕ್ತ ಮಾಡಿದರು. ಅದೇ ಪುರುಷಸೂಕ್ತ. ಈ ಕಾರಣದಿಂದ ವೇದಸೂಕ್ತಗಳಲ್ಲೇ ಪುರುಷಸೂಕ್ತ ಅತ್ಯಂತ ಶ್ರೇಷ್ಠವಾದ ಸೂಕ್ತ. ಈ ಸೂಕ್ತವನ್ನು ಮತ್ತೆ ಭಟ್ಟಿಇಳಿಸಿ, ಮೂರು ಪಾದಗಳ ಗಾಯತ್ತ್ರಿ ಮಂತ್ರ(ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್) ನಿರ್ಮಾಣವಾಯಿತು. ಇಲ್ಲಿ ‘ತತ್ ಸವಿತುರ್ ವರೇಣ್ಯಂ’ ಋಗ್ವೇದಕ್ಕೆ ಸಂಬಂಧಪಟ್ಟಿದ್ದು, ‘ಭರ್ಗೋ ದೇವಸ್ಯ ಧೀಮಹಿ’ ಯಜುರ್ವೇದಕ್ಕೆ ಸಂಬಂಧಪಟ್ಟಿದ್ದು, ‘ಧೀಯೊ ಯೊ ನಃ ಪ್ರಚೋದಯಾತ್’ ಸಾಮವೇದಕ್ಕೆ ಸಂಬಂಧಪಟ್ಟಿದ್ದು. ಹೀಗೆ ಮೂರು ವೇದಗಳ ಸಾರ ಗಾಯತ್ತ್ರಿಯ ಮೂರುಪಾದಗಳುಳ್ಳ ಒಂದು ಮಂತ್ರದಲ್ಲಿದೆ. ಇದಕ್ಕಾಗಿ ಗಾಯತ್ತ್ರಿ ಮಂತ್ರವನ್ನು ‘ವೇದಮಾತಾ’ ಎನ್ನುತ್ತಾರೆ. ಈ ಗಾಯತ್ತ್ರಿಯಿಂದ ರಸ ತೆಗೆದಾಗ ಮೂರು ಪಾದಗಳಿಂದ ಮೂರು ಪದಗಳುಳ್ಳ ವ್ಯಾಹೃತಿ: “ಭೂಃ ಭುವಃ ಸ್ವಃ”. ಈ ಮೂರು ಪದಗಳ ಸಾರ ಮೂರು ಅಕ್ಷರದ(ಅ, ಉ, ಮ) ಓಂಕಾರ-ॐ.
ಓಂಕಾರದಲ್ಲಿ ‘ಅ’ಕಾರ ಋಗ್ವೇದಕ್ಕೆ, ‘ಉ’ಕಾರ ಯಜುರ್ವೇದಕ್ಕೆ ಮತ್ತು ‘ಮ’ಕಾರ ಸಾಮವೇದಕ್ಕೆ ಸಂಬಂಧಪಟ್ಟಿದ್ದು. ಋಗ್ವೇದ " ಅಗ್ನಿಮೀ”ಳೇ ಪುರೋಹಿತಂ ಯಜ್ಞಸ್ಯ ದೇವಂ-ಋತ್ವಿಜಂ” | ಹೋತಾ”ರಂ ರತ್ನ ಧಾತಮಂ |..." ಎಂದು ‘ಅ’ ಕಾರದಿಂದ ಪ್ರಾರಂಭವಾಗುತ್ತದೆ. ಮತ್ತು “....ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ಹಃ: | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ ॥” ಎಂದು ‘ಇ’ಕಾರದಲ್ಲಿ ಕೊನೆಗೊಳ್ಳುತ್ತದೆ. ಅಲ್ಲಿಂದ ಮುಂದುವರಿದು ಯಜುರ್ವೇದ “ಇಷೇ ತ್ವೋರ್ಜೆ ತ್ವಾ …” ಎಂದು ‘ಇ’ಕಾರದಿಂದ ಪ್ರಾರಂಭವಾಗಿ “……..ಸಮುದ್ರೋ ಬಂಧುಃ” ಎಂದು ‘ಉ’ಕಾರದಲ್ಲಿ ಕೊನೆಗೊಳ್ಳುತ್ತದೆ. ಹೀಗೆ ಓಂಕಾರದಲ್ಲಿನ ‘ಅ’ಕಾರ ಮತ್ತು ‘ಉ’ಕಾರ ಋಗ್ವೇದ ಮತ್ತು ಯಜುರ್ವೇದವನ್ನು ಪೂರ್ಣವಾಗಿ ಸೂಚಿಸುವ ಸಂಕ್ಷೇಪಣಾ(abbreviation)ರೂಪ. ಇಲ್ಲಿಂದ ಮುಂದೆ ಸಾಮವೇದ. ಸಾಮವೇದ “ಅಗ್ನ ಆ ಯಾಹಿ ………” ಎಂದು ‘ಅ’ಕಾರದಿಂದ ಆರಂಭವಾಗಿ “……ಬ್ರ್ಹಸ್ಪತಿರ್ದಧಾತು” ಎಂದು ‘ಉ’ಕಾರದಲ್ಲಿ ಕೊನೆಗೊಳ್ಳುತ್ತದೆ. ಆದ್ದರಿಂದ ಇಲ್ಲಿ ‘ಮ’ ಕಾರ ಬಂದಿಲ್ಲ. ಆದರೆ ನಮಗೆ ತಿಳಿದಂತೆ ಸಾಮವೇದ ನಾದ ರೂಪದಲ್ಲಿದೆ. ಓಂಕಾರದಲ್ಲಿ ಕೂಡಾ ‘ಮ’ ಎನ್ನುವುದು ನಾದರೂಪದಲ್ಲಿ ಹೊರ ಹೊಮ್ಮುವ ಅಕ್ಷರ- ಅದು ಸಂಗೀತ. ಹೀಗೆ ಓಂಕಾರ ವೇದದ ಸಂಕ್ಷೇಪಣಾರೂಪವಾದ ಬೀಜಾಕ್ಷರ. ಇದು ನಮಗೆ ವೇದವನ್ನು ಗುರುತಿಸುವ ಮಾರ್ಗದರ್ಶಿ. ಆದ್ದರಿಂದ ಇದು ಭಗವಂತನನ್ನು ಸ್ತೋತ್ರ ಮಾಡುವ ಮಂತ್ರಗಳಲ್ಲಿ ಅತ್ಯಂತ ಪ್ರಕೃಷ್ಟವಾದುದ್ದು. ಇದಕ್ಕಿಂತ ದೊಡ್ಡ ಸ್ತೋತ್ರಮಾಡುವ ಶಬ್ದ ಈ ಪ್ರಪಂಚದಲ್ಲಿಲ್ಲ.

No comments:

Post a Comment